ಜಲಾಂತರ್ಗಾಮಿ ನಿರೋಧ ಸಾಧನಗಳು	-
ಒಂದನೆಯ ಮತ್ತು ಎರಡನೆಯ ಜಾಗತಿಕ ಮಹಾಯುದ್ಧಗಳಲ್ಲಿ ಜಲಾಂತರ್ಗಾಮಿಗಳು ಬಹಳ ಹಾವಳಿ ಮಾಡುತ್ತಿದ್ದುವು. ಇದನ್ನು ನಿವಾರಿಸಲು ಅನೇಕ ಪ್ರತಿಸಂಚುಗಳನ್ನು ಅನುಸರಿಸಲಾಯಿತು. ಶತ್ರುಜಲಾಂತರ್ಗಾಮಿಗಳ ದೃಷ್ಟಿಗೆ ಹಡಗುಗಳು ಬೀಳದಂತೆ ಅವನ್ನು ಬಣ್ಣದ ಪಟ್ಟಿಗಳು, ಹೊಗೆಯ ತೆರೆ ಮೊದಲಾದವನ್ನು ಉಪಯೋಗಿಸಿ ಮರೆಮಾಡಲಾಗುತ್ತಿತ್ತು. ಹಡಗುಗಳಿಗೆ ಬಣ್ಣ ಬಳಿದು ಅವುಗಳ ಬಾಹ್ಯರೂಪವನ್ನು ಪಲ್ಲಟ ಮಾಡಿ, ಕಪಟ ರೂಪ ನೀಡಿ, ನಿಜಸ್ಥಿತಿ ತಿಳಿಯದಂತೆ ಭ್ರಮೆ ಹುಟ್ಟಿಸಲಾಗುತ್ತಿತ್ತು. ಹಡಗುಗಳ ಸಂಚಾರ ಮಾರ್ಗ ಮತ್ತು ವೇಗ ಸರಿಯಾಗಿ ತಿಳಿದಾಗ ಮಾತ್ರ ಜಲಾಂತರ್ಗಾಮಿಗಳು ಟಾರ್ಪಿಡೋಗಳಿಂದ ಗುರಿಯಿಟ್ಟು ಹೊಡೆಯಬಲ್ಲವು. ಆದ್ದರಿಂದ ಹಡಗುಗಳನ್ನು ನೇರವಾಗಿ ನಡೆಸದೆ ಡೊಂಕುಡೊಂಕಾಗಿ ನಡೆಸುವ ತಂತ್ರ ಆಚರಿಸಲ್ಪಟ್ತಿತು. ಇದು ಜಲಾಂತರ್ಗಾಮಿಗಳನ್ನು ಗಲಿಬಿಲಿಪಡಿಸುತ್ತಿತ್ತು. ಜಲಾಂತರ್ಗಾಮಿ ಸಮುದ್ರದ ಮೇಲಿದ್ದಾಗ ಯುದ್ಧನೌಕೆಗಳು ಅದಕ್ಕೆ ಬಂದೂಕು ಫಿರಂಗಿ ಗುಂಡುಗಳನ್ನೂ ಬಾಂಬುಗಳನ್ನೂ ಎಸೆಯುತ್ತಿದ್ದವು. ಕಿವಿ ಮೂತಿಯಿರುವ ನೌಕೆಗಳು ದಸಿನೆಡುವ ಯಂತ್ರದ ಚಮ್ಮಟಿಗೆಯಿಂದ ಜಲಾಂತರ್ಗಾಮಿಯ ಪಕ್ಕಗಳನ್ನು ತಿವಿದು ಒಡೆಯುತ್ತಿದ್ದವು. ವಿಮಾನಗಳು ರಾಕೆಟುಗಳನ್ನು ಎಸೆದು ಜಲಾಂತರ್ಗಾಮಿಗಳನ್ನು ಸುಡುತ್ತಿದ್ದವು. ಇಂಥ ರಾಕೆಟುಗಳು ಬಿಸ್ಕೇ ಖಾರಿಯಲ್ಲಿ ಅನೇಕ U-ದೋಣಿಗಳನ್ನು ನಾಶಪಡಿಸಿದವು. 

	ಸಮುದ್ರದೊಳಗಿನ ಜಲಾಂತರ್ಗಾಮಿಗಳನ್ನು ನಾಶಪಡಿಸಲು ವಿಶೇಷ ಬಗೆಯ ಆಯುಧಗಳು ತಯಾರಾಗಿವೆ. ತೆಟ್ಟೆ ನೀರಿನೊಳಗೆ ಜಲಾಂತರ್ಗಾಮಿ ಇರುವಾಗ ಅದಕ್ಕೆ ಬೆಂಕಿ ಹಾಕಲು ವಿಶೇಷ ಬಗೆಯ ಬಾಂಬು ಆವಿಷ್ಕರಿಸಲ್ಪಟ್ಟಿದೆ.  ಅದನ್ನು ನೇರವಾಗಿ ಹೊಡೆಯಲು ಸಂಪರ್ಕ ಬಾಂಬುಗಳನ್ನು ಪ್ರಯೋಗಿಸುವುದುಂಟು. ಹಲವು ಬಗೆಯ ಸಿಡಿಗುಂಡುಗಳಿರುವ ಟಾರ್ಪೀಡೋ ಎಂಬ ಚುಟ್ಟದ ಆಕಾರದ ಸ್ವಯಂಚಾಲಿತ ಅಸ್ತ್ರವನ್ನು ಜಲಾಂತರ್ಗಾಮಿಗೆ ಗುರಿಯಿಟ್ಟು ನೀರಿನೊಳಗಡೆಯಿಂದ ಪ್ರಯೋಗಿಸಿ ಅದನ್ನು ನಾಶಪಡಿಸುವುದು ಸಾಧ್ಯ. ಅಮೇರಿಕನ್ನರ ಡಿಸ್ಟ್ರಾಯರ್ ಎಂಬ ನೌಕೆಗಳು ಜರ್ಮನರ U -ಬೋಟ್ ಎಂಬ ಜಲಾಂತರ್ಗಾಮಿಗಳನ್ನು ಟಾರ್ಪೀಡೋಗಳಿಂದ ಹೊಡೆದು ನಾಶ ಮಾಡಿದ್ದುಂಟು. ಜಲಾಂತರ್ಗಾಮಿಗಳನ್ನು ಹೊಡೆಯಲು ಸ್ವಯಂಚಾಲಿತ ಆಯುಧಗಳು ಬಂದಿವೆ. ರಾಕೆಟನಿಂದ ಮಾಡಲ್ಪಟ್ಟ ರೇಡಿಯೋ ಅನುಸರಣ (ಹೋಮಿಂಗ್) ಟಾರ್ಪೀಡೋಗಳು ಸಮುದ್ರದೊಳಗೆ ಶತ್ರು ಜಲಾಂತರ್ಗಾಮಿಗಳನ್ನು ಹುಡುಕಿಕೊಂಡು ಹೋಗುತ್ತವೆ. ಜಲಾಂತರ್ಗಾಮಿ ನೀರಿನೊಳಗಿರುವಾಗ  ಅದರ ಎಂಜಿನುಗಳು ಮಾಡುವ ಸದ್ದನ್ನು ಇಲ್ಲವೇ ನೀರಿನಲ್ಲಿ ಉಂಟುಮಾಡುವ ಕಂಪನವನ್ನು ಸಮುದ್ರದ ಮೇಲಿರುವವರು ಸೂಕ್ತ ಸಲಕರಣೆಗಳಿಂದ ಪತ್ತೆ ಮಾಡಿ ಜಲಾಂತರ್ಗಾಮಿಯ ಇರವನ್ನು ಅರಿಯಬಲ್ಲರು. 

	ಜಲಾಂತರ್ಗಾಮಿಗೆ ಹಾನಿ ಮಾಡಲು ಆಳದ ಸಿಡಿಗುಂಡು (ಡೆಪ್ತ್ ಚಾರ್ಚ್) ಎಂಬ ಸಾಧನ ಬಲು ಪ್ರಬಲ ಆಯುಧ. ಅದು ಊದುಕೊಳವೆಯ ಆಕಾರದ ಬಾಂಬ್. ಅದರೊಳಗೆ 300 ಪೌಂಡ್ ಟಿ ಎನ್ ಟಿ ಸಿಡಿಮದ್ದಿರುತ್ತದೆ. ಅದರಲ್ಲಿರುವ ಒಂದು ತಿರುಪನ್ನು ನಿಯಂತ್ರಿಸಿ ಆ ಬಾಂಬನ್ನು ಒಂದು ಹಡಗಿಂದಾಗಲಿ ವಿಮಾನದಿಂದಾಗಲಿ ನೀರಿನೊಳಗೆ ಎಸೆದರೆ ಅದರೊಳಗಿರುವ ಸ್ವಯಂಚಾಲಕ ರಚನೆ ಆ ಬಾಂಬು ಜಲಾಂತರ್ಗಾಮಿಯಿರುವ ಸ್ಥಳಕ್ಕೆ, ಅದೇ ಆಳಕ್ಕೆ ಹೋಗುವಂತೆ ಮಾಡುತ್ತದೆ. ಆ ಸ್ಥಳದಲ್ಲಿನ ನೀರಿನ ಒತ್ತಡ ಆ ತಿರುಪನ್ನು ಒತ್ತಿ ಬಾಂಬಿಗೆ ಬೆಂಕಿ ಹಚ್ಚಿ ಸಿಡಿಯುವಂತೆ ಮಾಡುತ್ತದೆ. ಆ ಸ್ಪೋಟದ ಪ್ರಚಂಡ ರಭಸ ಆಲ್ಲಿರುವ ನೀರನ್ನು ತೀವ್ರವಾಗಿ ತಲ್ಲಣಗೊಳಿಸಿ ಧಕ್ಕಾತರಂಗಳನ್ನು ಉಂಟುಮಾಡುತ್ತದೆ. ಜಲಾಂತರ್ಗಾಮಿ ಸ್ಪೋಟದ ಕೇಂದ್ರದಿಂದ ನೂರಾರು ಅಡಿಗಳ ದೂರದಲ್ಲಿದ್ದರೂ ಆ ಧಕ್ಕೆಗಳು ಅದನ್ನು ಹಾನಿಪಡಿಸುತ್ತವೆ. ಅಥವಾ ಪೂರ್ತಿ ಮುಳುಗಿಸುತ್ತವೆ. 750 ಆಳದ ವರೆಗೆ ಜಲಾಂತರ್ಗಾಮಿ ಎಲ್ಲಿದ್ದರೂ ಬಾಂಬ್ ಅಲ್ಲಿಗೆ ಹೋಗಿ ಅದನ್ನು ನಾಶಪಡಿಸಬಲ್ಲದು. ಒಂದು ತಿಂಗಳಲ್ಲೇ ಬ್ರಿಟನ್ ಅಂಥ 2000 ಆಳದ ಸಿಡಿಗುಂಡುಗಳನ್ನು ಉಪಯೋಗಿಸಿ ಜರ್ಮನಿಯ ಅನೇಕ 

U -ದೋಣಿಗಳನ್ನು ಧ್ವಂಸಮಾಡಿತು. ಒಂಟಿ ಹಡಗಿನ ದಾಳಿಯಿಂದ ಜಲಾಂತರ್ಗಾಮಿ ತಪ್ಪಿಸಿಕೊಂಡು ಹೋಗಲು ಸಾಧ್ಯತೆ ಇರುವುದರಿಂದ ಅನೇಕ ಹಡಗುಗಳು ಕೂಡಿಕೊಂಡು ಜಲಾಂತರ್ಗಾಮಿಯ ಸುತ್ತಲೂ ಈ ಬಾಂಬುಗಳನ್ನು ಹಾಕುವುದು ಕ್ರಮ. 

	ಬಂದರುಗಳಿಗೂ ಇಕ್ಕಟ್ಟಾದ ಕಡಲ್ಗಾಲುವೆಗಳಿಗೂ ಹೋಗಲು ಜಲಾಂತರ್ಗಾಮಿಗಳು ಪ್ರಯತ್ನಿಸುತ್ತವೆ. ಅವು ಹೋಗದಂತೆ ತಡೆಗಟ್ಟಲು ಸೂಚಕ ವಂಕಿ (ಇಂಡಿಕೇಟರ್ ಲೂಪ್) ಎಂಬ ಸಲಕರಣೆಯನ್ನು ಸಮುದ್ರ ಬುಡದಲ್ಲಿ ಹಾಕಿದರೆ  ಅದು ತನ್ನಮೇಲೆ ಹೋಗುವ ಉಕ್ಕಿನ ಹಡಗುಗಳ ಪಥಗಳನ್ನು ತೋರಿಸುತ್ತದೆ. ಅದರಿಂದ ಆ ಪ್ರದೇಶದಲ್ಲಿ ಸಿಡಿಮದ್ದುಗಳ ಕ್ಷೇತ್ರವನ್ನು (ಮೈನ್ ಫೀಲ್ಡ್) ಸ್ಥಾಪಿಸಿ, ಸಮುದ್ರತೀರದ ಅವಲೋಕನಸ್ಥಾನದಿಂದ ಆ ಸಿಡಿಮದ್ದುಗಳಿಗೆ ವಿದ್ಯುತ್ತಿನಿಂದ ಬೆಂಕಿ ಹೊತ್ತಿಸಿ ಸ್ಫೋಟಿಸಿದರೆ ಆ ಜಲಾಂತರ್ಗಾಮಿಗಳು ನಾಶವಾಗುತ್ತವೆ. 

ಶತ್ರುಜಲಾಂತರ್ಗಾಮಿಗಳು ಪ್ರಯಾಣಿಕರ ಹಡಗುಗಳನ್ನು ಮುಳುಗಿಸುತ್ತಿದ್ದವು. ವರ್ತಕ ಮಂಡಲಿಗರ ವ್ಯಾಪಾರದ ಹಡಗುಗಳನ್ನು ಲೂಟಿಮಾಡುತ್ತಿದ್ದವು. ಈ ಹಾವಳಿಯನ್ನು ನಿವಾರಿಸಲು ಆಯುಧ ಧರಿಸಿದ ಸೈನಿಕ ತಂಡಗಳು ಕಾವಲು ಹಡಗುಗಳಲ್ಲಿ ಆ ಪ್ರಯಾಣಿಕರ ಮತ್ತು ಸರಕುಗಳ ಮೈಗಾವಲಿಗಾಗಿಯೂ ಮಾರ್ಗದರ್ಶಕವಾಗಿಯೂ ಜೊತೆಯಲ್ಲಿ ಹೋಗುತ್ತಿದ್ದವು. ಜಲಾಂತರ್ಗಾಮಿಗಳು ಕೊಳ್ಳೆಹೊಡೆಯಲು ಹೋದಾಗ ಬೆಂಗಾವಲಿನವರು ಹೋರಾಡಿ ಅವನ್ನು ನಾಶಪಡಿಸುತ್ತಿದ್ದರು. ಬೆಂಗಾವಲಿಗೆ ಆಕಾಶಬುಟ್ಟಿಗಳನ್ನೂ ವಿಮಾನಗಳನ್ನೂ ಉಪಯೋಗಿಸಲಾಗುತ್ತಿತ್ತು. ಪಹರೆ ಹಡಗಿಗೆ ಸೇರಿಸಿದ ಆಕಾಶಬುಟ್ಟಿಯಲ್ಲಿ ವೀಕ್ಷಕನೊಬ್ಬ  ಕುಳಿತು ಎತ್ತರದಲ್ಲಿದ್ದ ಅವನ ಕಣ್ಣುಗಳನ್ನು ಬಲು ದೂರದ ದಿಗಂತದ ವರೆಗೂ ಹೊರಳಿಸುತ್ತ, ಜಲಾಂತರ್ಗಾಮಿ ಸುಳುವಿನ ಎಚ್ಚರಿಕೆಯನ್ನು ಕೊಡುತ್ತಿದ್ದ. ದಾಳಿ ಮಾಡಲು ಬರುತ್ತಿದ್ದ ಜಲಾಂತರ್ಗಾಮಿ ಆಕಾಶಬುಟ್ಟಿಯನ್ನು ದೂರದಿಂದ ನೋಡಿದ ಕೂಡಲೇ ನೀರೊಳಗೆ ಮುಳುಗಿ ಅವಿತುಕೊಳ್ಳುತ್ತಿತ್ತು. ಇದರಿಂದ ಜಲಾಂತರ್ಗಾಮಿಗಳ ಉಪಟಳ ಬಲು ಮಟ್ಟಿಗೆ ಕಡಿಮೆಯಾಗುತ್ತಿತ್ತು. ನಾನಾ ಬಗೆಯ ಹಡಗುಗಳೂ ಮೋಟರ್ ಲಾಂಚುಗಳೂ ಮೋಟರ್ ದೋನಿಗಳೂ ಆಕಾಶ ನೌಕೆಗಳೂ ಬ್ಲಿಂಪ್ ಎಂಬ ಆಕಾಶಬುಟ್ಟಿಗಳೂ ಜಲಾಂತರ್ಗಾಮಿಗಳನ್ನು ಹುಡುಕುತ್ತ ಗಸ್ತು ತಿರುಗುತ್ತಿದ್ದುವು. 

	ಬ್ರಿಟಿಷರ ಕಿ-ಹಡಗುಗಳೆಂಬ ನೌಕೆಗಳಲ್ಲಿ ಸೈನಿಕರು ವರ್ತಕರ ವೇಷ ಧರಿಸಿ, ತಮ್ಮ ಬಂದೂಕುಗಳನ್ನು ಬಚ್ಚಿಟ್ಟು, ವ್ಯಾಪಾರಿಗಳಂತೆ ನಟಿಸುತ್ತ ಹೋಗುವುದಿತ್ತು. ಜರ್ಮನರ U -ದೋಣಿಗಳು ಆ ನೌಕೆಗಳಿಗೆ ಮರುಳಾಗಿ ಅವನ್ನು ಲೂಟಿ ಮಾಡಲು ಸಾಕಷ್ಟು ಹತ್ತಿರ ಹೋದಾಗ ಹಡಗಿನ ಯೋಧರು ಬಂದೂಕುಗಳನ್ನು ಹೊರತೆಗೆದು ಜಲಾಂತರ್ಗಾಮಿಗಳನ್ನು ನಾಶಪಡಿಸುತ್ತಿದ್ದರು. ಕೆಲವು ಸಾರಿ ಕಿ-ನೌಕೆಗಳಲ್ಲಿ ಹೋಗುತ್ತಿದ್ದ ಸೈನಿಕರು ತಾವು ಶತ್ರು ಜಲಾಂತರ್ಗಾಮಿಗಳಿಗೆ ಹೆದರಿಕೊಂಡಂತೆ ನಟಿಸುತ್ತ ಹಿಮ್ಮೆಟ್ಟುವುದೂ ಇತ್ತು. ಜಲಾಂತರ್ಗಾಮಿ ಅವರನ್ನು ಅಟ್ಟಿಸಿಕೊಂಡು ಹೋದಾಗ ಸೈನಿಕರು ಏಕಾಏಕಿ ಮುನ್ನುಗ್ಗಿ ಅದನ್ನು ದಾಳಿಮಾಡುತ್ತಿದ್ದರು. ಜಲಾಂತರ್ಗಾಮಿಗಳನ್ನು ನಾಶಮಾಡಲು ನಾನಾ ಬಗೆಯ ಸಿಡಿಮದ್ದುಗಳನ್ನು ಸಮುದ್ರಪ್ರದೇಶದಲ್ಲಿ ನೆಡಲಾಗುತ್ತದೆ. ಇಂಥವರನ್ನು ಜಲಾಂತರ್ಗಾಮಿ ತಗಲಿದ ಕೂಡಲೆ ಅವು ಸ್ಪೋಟಿಸಿ ಅದನ್ನು ನಾಶಪಡಿಸುವುದು. ಸಮುದ್ರತಳದಲ್ಲಿ ನೆಟ್ಟಿರುವ ಕಾಂತೀಯ ಸಿಡಿಮದ್ದುಗಳು ಮೇಲೆ ಎತ್ತರದಲ್ಲಿ ಜಲಾಂತರ್ಗಾಮಿ ಹೋಗುವಾಗ ಕಾಂತ ವಿದ್ಯುತ್ತಿನ ಪರಿಣಾಮವಾಗಿ ಸ್ಪೋಟಿಸುವುವು. ಸಮುದ್ರ ತಳದಲ್ಲಿ ನೆಟ್ಟಿರಿವ ಒತ್ತಡದ ಸಿಡಿಮದ್ದಿನ ಮೇಲೆ ಜಲಾಂತರ್ಗಾಮಿ ಹೋಗುವಾಗ ನೀರೊತ್ತಡದಿಂದ ಸಿಡಿಮದ್ದು ಸ್ಫೋಟಿಸುತ್ತದೆ. ಸೋನಾರ್ ಎಂಬ ಸಲಕರಣೆ ಶ್ರವಣಾತೀತ ಶಬ್ದ ತರಂಗಗಳನ್ನು (ಅಲ್ಟ್ರಾಸಾನಿಕ್ಸ್) ನೀರಿನೊಳಗೆ ಪ್ರೇಷಿಸಿದಾಗ ಅವು ಜಲಾಂತರ್ಗಾಮಿಯಿಂದ ಪ್ರತಿಫಲಿಸಲ್ಪಟ್ಟು ಅವುಗಳ ಪ್ರತಿಧ್ವನಿಗಳು ಸೋನಾರಿನಿಂದ ಹಿಡಿಯಲ್ಪಡುತ್ತವೆ. ಈ ಸಾಧನ ಜಲಾಂತರ್ಗಾಮಿಗಳು ಸಮುದ್ರದೊಳಗಿರುವ ನಿಶ್ಚಿತ ಸ್ಥಾನಗಳನ್ನೂ ಆಳಗಳನ್ನೂ ಪತ್ತೆಮಾಡುತ್ತದೆ. ಇದರಿಂದ ಆ ಜಲಾಂತರ್ಗಾಮಿಗಳನ್ನೂ ನಾಶಮಾಡುವ ಕ್ರಮಗಳನ್ನು ಆಚರಿಸಲು ಸೋನಾರ್ ನೆರವಾಗುತ್ತದೆ. ಎರಡನೆಯ ಮಹಾಯುದ್ಧದಲ್ಲಿ ಜಲಾಂತರ್ಗಾಮಿಗಳನ್ನು ನಿರೋಧಿಸುವ ಸಮಸ್ತ ಯುದ್ಧನೌಕೆಗಳನ್ನೂ ಸೋನಾರುಗಳಿಂದ ಸಜ್ಜೀಕರಿಸಲಾಗಿತ್ತು. 

 	ಜಲಾಂತರ್ಗಾಮಿಯನ್ನು ನಿರೋಧಿಸುವ ಸಾಧನಗಳಲ್ಲಿ ಅತ್ಯಂತ ಪ್ರಬಲವಾದದ್ದು ರೇಡಾರ್, ಇದರಿಂದ ಪ್ರಸಾರವಾಗುವ ರೇಡಿಯೋ ತರಂಗಗಳು ಹ್ರಸ್ವ ವಿದ್ಯುತ್‍ಸ್ಪಂದಗಳ ರೂಪದಲ್ಲಿ (ಷಾರ್ಟ್ ಪಲ್ಸ್) ಜಲಾಂತರ್ಗಾಮಿಯನ್ನು ತಲುಪಿ ಅದರಿಂದ ಪ್ರತಿಫಲಿಸಲ್ಪಟ್ಟು ಹಿಂದಕ್ಕೆ ಬಂದಾಗ ಆ ನೌಕೆ ಎಷ್ಟು ದೂರದಲ್ಲಿದೆ, ಎತ್ತ ಕಡೆ ಯವ್ಯಾವ ದಿಶೆಗಳಲ್ಲಿ ಚಲಿಸುತ್ತದೆ ಮುಂತಾದ ಸಂಗತಿಗಳು ಸ್ಪಷ್ಟವಾಗಿ ತಿಳಿಯುತ್ತವೆ. ಸಮುದ್ರದ ಮೇಲೆ 2000 ಗಳ ದೂರದಲ್ಲಿರುವ ಜಲಾಂತರ್ಗಾಮಿಯನ್ನು ರೇಡಾರಿನಿಂದ ಪತ್ತೆ ಹಚ್ಚಬಹುದು. ಜಲಾಂತರ್ಗಾಮಿ ತನ್ನ ಬ್ಯಾಟರಿಗಳನ್ನು ಆವೇಶಿಸಲು ಕತ್ತಲಿನಲ್ಲಿ ಸಮುದ್ರದ ಮೇಲಕ್ಕೆ ಬಂದಾಗ ಅದನ್ನು ರೇಡಾರಿನಿಂದ ಗುರುತಿಸಿ ನಾಶಪಡಿಸುವುದು ಸಾಧ್ಯ. 

	ನೌಕಾ ಇಲಾಖೆ ಜಲಾಂತರ್ಗಾಮಿ ನಿರೋಧಸಾಧನಗಳನ್ನು ಬಹಳ ವಿಸ್ತರಿಸಿದೆ. ಶತ್ರುಗಳ ರೇಡಿಯೋ ವ್ಯವಹಾರದಿಂದ ಅವರ ಸುದ್ದಿಗಳನ್ನು ತಿಳಿಯುವದು; ಅವರ ಗುಪ್ತ ಸಂಕೇತಗಳನ್ನು ಹಿಡಿದು ವಿಸಂಕೇತಿಸುವುದು; ಶತ್ರು ಜಲಾಂತರ್ಗಾಮಿಯ ಕಾರ್ಯಕ್ರಮ, ದಿಕ್ಕನ್ನು ಅರಿತುಕೊಳ್ಳುವುದು; ಜಲಾಂತರ್ಗಾಮಿ ಸಂದೇಶವನ್ನು ಕಳುಹಿಸಿದ ಕೆಲವು ಸೆಕೆಂಡುಗಳಲ್ಲಿ ಅದರ ನೆಲೆಯನ್ನು ನಿಖರವಾಗಿ ನಕಾಶೆ ಬರಿಯುವದು- ಇವೆಲ್ಲ ಜಲಾಂತರ್ಗಾಮಿ ನಿರೋಧ ಸಾಧನಗಳು. ಜಲಾಂತರ್ಗಾಮಿಗಳು ಹಡಗುಗಳನ್ನು ಒಡೆಯಲು ಟಾರ್ಪಿಡೋಗಳನ್ನು ಗುರಿಯಿಟ್ಟು ಎಸೆದಾಗ ಇವು ತಗಲದಂತೆ ಹಡಗಿನ ಸುತ್ತಲೂ ಟಾರ್ಪಿಡೋ ತಡೆಬಂಡೆಗಳಿವೆ. ಹಡಗುಗಳನ್ನು ನಾಶಮಾಡಲು ಶತ್ರು ಜಲಾಂತರ್ಗಾಮಿಗಳು ನೆಟ್ಟಿರುವ ಸಿಡಿಮದ್ದುಗಳನ್ನು ನಿವಾರಿಸಲು ಸಿಡಿಮದ್ದು ಗುಡಿಸುವ ವಿಶೇಷ ಹಡಗುಗಳಲ್ಲಿರುವ ಉದ್ದವಾದ ಹೊರಜಿಗಳಿಗೆ ಸೇರಿಸಿರುವ ಪ್ಯಾರಾವೇನ್ ಎಂಬ ಹರಿತವಾದ ಆಯುಧಗಳು ನೀರೊಳಗಿರುವ ಸಿಡಿಮದ್ದುಗಳಿಗೆ ಲಂಗುರು ಹಾಕಿರುವ ಹೊರಜಿಗಲನ್ನು ಕತ್ತರಿಸಿ ಅವು ನಿಷ್ಪ್ರಯೋಜಕವಾಗುವಂತೆ ಮಾಡುತ್ತವೆ.
(ಎಂ.ಜಿ.ಕೆ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ